ಕೊರವಂಜಿ 1
 
ಅಲೆಮಾರಿ ಜನಗಳಲ್ಲಿ ಒಂದು ಪಂಗಡದವರನ್ನು ಈ ಹೆಸರಿನಿಂದ ಕರೆಯುತ್ತಾರೆ. ಒಂದು ಕಾಲಕ್ಕೆ ಈ ಕೊರವಂಜಿ ಎಂಬ ಹೆಸರು ದಕ್ಷಿಣ ಭಾರತದಲ್ಲೆಲ್ಲ ಚಿರಪರಿಚಿತವಾಗಿತ್ತು. ಹೊಟ್ಟೆಯ ಪಾಡಿಗಾಗಿ ಮನೆಮನೆಯ ಬಾಗಿಲಿಗೆ ಬರುವ ಕೊರವಂಜಿ ತನ್ನ ವೇಷ ಭೂಷಣಗಳಿಂದಲೂ ಭವಿಷ್ಯವನ್ನು ಹೇಳುವ ಕಾಯಕದಿಂದಲೂ ವಿಶಿಷ್ಟವಾದ ಹಾಡುಗಳ ವೈಖರಿಯಿಂದಲೂ ಎಲ್ಲರ ಮನಸ್ಸನ್ನೂ ಬಹು ಹಿಂದಿನಿಂದಲೂ ಆಕರ್ಷಿಸುತ್ತ ಬಂದಿದ್ದಾಳೆ.

	ಕೊರವಂಜಿ ಎಂಬ ಶಬ್ದ ಪ್ರಮುಖ ದ್ರಾವಿಡಭಾಷೆಗಳಲ್ಲೆಲ್ಲ ಕಂಡುಬರುತ್ತದೆ. ತಮಿಳಿನಲ್ಲಿ ಪುಲ್ಲಿಂಗರೂಪ ಕು¾ವನ್ ಎಂದಾದರೆ, ಕು¾ತ್ತಿ, ಕು¾ವಿ, ಕು¾ವಂಚಿ(ಜಿ) ಎಂಬ ಹಲವಾರು ಸ್ತ್ರೀಲಿಂಗರೂಪಗಳಿವೆ. ಇದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ಕೊ¾ವಂಜಿ ಕೊ¾ ವತಿ, ಕೊ¾ ವಿತಿ, ತೆಲುಗಿನಲ್ಲಿ ಕೊ¾ ವತ, ಕೊ¾ ವಂಜಿ ಮುಂತಾದ ರೂಪಗಳು ಪ್ರಯೋಗದಲ್ಲಿವೆ. ಈ ಜನ ಗುಡ್ಡಗಾಡುಗಳಲ್ಲಿ ವಾಸಿಸುತ್ತ ಜೀವನೋಪಾಯಕ್ಕೆ ದನಕರುಗಳ ಪಾಲನೆ, ಬೆತ್ತದ ಕೆಲಸ, ಬೇಟೆ ಮೊದಲಾದುವನ್ನು ಅನುಸರಿಸುವುದಲ್ಲದೆ, ಹೆಂಗಸರು ಭವಿಷ್ಯ ಹೇಳುವ ಕಸಬನ್ನು ಅವಲಂಬಿಸಿರುವುದು ಕಂಡುಬರುತ್ತದೆ. 

	ಸಮಾಜಶಾಸ್ತ್ರಜ್ಞರ ಪರಿಶೀಲನೆಯ ಪ್ರಕಾರ ಇವರು ಬಹುಮಟ್ಟಿಗೆ ಭರತಖಂಡದ ಪಶ್ಚಿಮಭಾಗದಲ್ಲಿಯೇ ವಿಶೇಷವಾಗಿ ವ್ಯಾಪಿಸಿರುವಂತಿದೆ. ಈ ಜನಾಂಗದವರನ್ನೇ ತೆಲುಗಿನಲ್ಲಿ ಒಮ್ಮೊಮ್ಮೆ ಎರುಕಲರು ಎಂದೂ ಕರೆಯುವುದುಂಟು. ಈಗ ಉಪಲಬ್ಧವಿರುವ ಸಾಮಗ್ರಿಗಳನ್ನೆಲ್ಲ ಪರಿಶೀಲಿಸಿದರೆ ಈ ಜಾತಿವಾಚಕದ ಮೂಲರೂಪ ತಮಿಳಿನಲ್ಲಿ ಬಳಕೆಯಲ್ಲಿರುವ ಕೆಲವು ಪದಗಳಲ್ಲಿ ಹುದುಗಿರಬೇಕು ಎನ್ನಿಸುತ್ತದೆ.

	ಈ ಜನ ಒಂದೆಡೆಯಲ್ಲಿ ನಿಲ್ಲದೆ ಸಂಚಾರಮಾಡುತ್ತಿರುವುದರಿಂದ ತಮಿಳು, ತೆಲುಗು ಇಲ್ಲವೇ ಕನ್ನಡಭಾಷೆಗಳನ್ನು ಬಲ್ಲವರಾಗಿರುತ್ತಾರೆ. ಇವರ ಕಸಬುಗಳಲ್ಲಿ ಭವಿಷ್ಯ ಹೇಳುವುದೂ ಒಂದು. ಅದರಲ್ಲಿಯೂ ಈ ಕೆಲಸ ಹೆಂಗಸರಿಗೆ ಮಾತ್ರ ಮೀಸಲಾಗಿರುವುದು ಇಲ್ಲಿ ಗಮನಿಸತಕ್ಕ ಸಂಗತಿ. ಇದಕ್ಕೆ ಸಂಬಂಧಿಸಿದಂತೆ ಒಂದು ಐತಿಹ್ಯವೂ ಇವರಲ್ಲಿ ಪ್ರಚಾರದಲ್ಲಿದೆ. ಒಮ್ಮೆ ಪಾರ್ವತಿ ಕೊರವಂಜಿಯ ವೇಷ ಧರಿಸಿ ಭವಿಷ್ಯ ಹೇಳಿದಳಂತೆ. ಇವರು ಆಕೆಯ ಮಕ್ಕಳಾದುದರಿಂದ ಈ ಪಂಗಡಕ್ಕೆ ಕೊರವರು ಎಂದು ಹೆಸರಾಯಿತಂತೆ. ಇನ್ನೊಂದು ಕಥೆಯಲ್ಲಿ ಪಾರ್ವತಿ ಸರ್ಪವನ್ನು ಸೀಳಿ ಅದರ ಹೊಟ್ಟೆಯಲ್ಲಿ ವಜ್ರ ವೈಡೂರ್ಯಗಳನ್ನು ತುಂಬಿ ತನ್ನ ಮಗುವಿಗೆ ಒಂದು ತೊಟ್ಟಿಲನ್ನು ಮಾಡಿಕೊಡುವಂತೆ ಮೇದರವನೊಬ್ಬನಿಗೆ ಹೇಳಿದಳಂತೆ. ಆತ ಹಾಗೆ ಮಾಡಿಕೊಡಲು ಹೆದರಿದಾಗ ಕೊರಚನೊಬ್ಬ ಎರಡೆಣಿಸದೆ ಅಂಥ ತೊಟ್ಟಿಲನ್ನು ಮಾಡಿಕೊಟ್ಟನಂತೆ. ಇದನ್ನು ಕಂಡ ಪಾರ್ವತಿ ಕೊರಚರವನಿಗೆ ತನ್ನಲ್ಲಿದ್ದ ಮಂತ್ರದಂಡವನ್ನೂ ಕೇರುವ ಮೊರವನ್ನೂ ಬಹುಮಾನವಿತ್ತು ಭವಿಷ್ಯ ಹೇಳುವ ಅಧಿಕಾರವನ್ನು ಅನುಗ್ರಹಿಸಿದಳಂತೆ. ಧರ್ಮರಾಯ ವನವಾಸದಲ್ಲಿದ್ದಾಗ ಆತನನ್ನು ಮೋಹಿಸಿದ ಹೆಣ್ಣೊಬ್ಬಳು ಭವಿಷ್ಯ ಹೇಳುವವಳಂತೆ ವೇಷ ಮರೆಸಿಕೊಂಡು ಹೋಗಿ ಆತನನ್ನು ವರಿಸಿದಳೆಂದೂ ಆಕೆಯ ಮಕ್ಕಳೇ ಈ ಕೊರವರೆಂದೂ ಮತ್ತೊಂದು ಕಲ್ಪನೆಯುಂಟು. ಈ ಹಲವಾರು ನಂಬಿಕೆಗಳ ನಿಶ್ಚಯಾಂಶವೇನೇ ಇರಲಿ, ಈ ಜನರಿಗೆ ಭವಿಷ್ಯ ಹೇಳುವ ಹಕ್ಕು ದೈವದತ್ತವಾಗಿ ಬಂದುದೆಂಬುದು ಇಲ್ಲಿನ ಧ್ವನಿ. ಪಾರ್ವತಿ ಮತ್ತು ಅನಾಮಿಕ ಹೆಂಗಸೊಬ್ಬಳು ಈ ಐತಿಹ್ಯಗಳಲ್ಲಿ ಬರುವುದರಿಂದ ಈ ಪಂಗಡದ ಸ್ತ್ರೀಯರಿಗೆ ಭವಿಷ್ಯ ಹೇಳುವುದು ಒಂದು ಉಚ್ಚವಾದ ಉದ್ಯೋಗವಾಗಿ ಪರಿಣಮಿಸಿತೆಂದು ತೋರುತ್ತದೆ.

	ಜನಪದ ಸಾಹಿತ್ಯದಲ್ಲಿಯಂತೂ ಜನಾನುರಾಗವನ್ನು ಗಳಿಸಿರುವ ಕೊರವಂಜಿಯ ಪಾತ್ರವನ್ನು ಚಿತ್ರಿಸುವ ಹಲವಾರು ರಚನೆಗಳುಂಟು. ಪಾರ್ವತಿ-ಕೊರವಂಜಿ, ಬ್ರಹ್ಮ-ಕೊರವಂಜಿ, ಪದ್ಮಾವತಿ-ಕೊರವಂಜಿ, ಅರ್ಜುನ-ಕೊರವಂಜಿ ಮತ್ತು ಮನ್ಮಥ-ಕೊರವಂಜಿ ಎಂಬ ಹಲವಾರು ಯಕ್ಷಗಾನಗಳೂ ಲಭಿಸುತ್ತವೆ. ಪ್ರೌಢಕಾವ್ಯಗಳಲ್ಲಿಯೂ (ನೇಮಿನಾಥಪುರಾಣ) ಸಂದರ್ಭೋಚಿತವಾಗಿ ಈ ಪಾತ್ರ ಪ್ರವೇಶಿಸಿರುವುದುಂಟು. 						(ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ